ಬರ್ಕ್, ಎಡ್ಮಂಡ್
1729-97. ರಾಜ್ಯ ತಂತ್ರನಿಪುಣ ಹಾಗೂ ತತ್ತ್ವಶಾಸ್ತ್ರಜ್ಞ. ಹುಟ್ಟಿದ್ದು ಡಬ್ಲಿನ್ನಿನಲ್ಲಿ (1729ರ ಜನವರಿ 12), ತಂದೆ ಪ್ರಾಟೆಸ್ಟೆಂಟ್. ಮತಕ್ಕೆ ಸೇರಿದವ. ತಾಯಿ ಕ್ಯಾಥೊಲಿಕ್ ಪಂಗಡದವಳು. ಟ್ರಿನಿಟಿ ಕಾಲೇಜಿನಲ್ಲಿ ಓದಿದ. ವಕೀಲಿ ವಿದ್ಯೆ ಕಲಿತನಾದರೂ ಆ ವೃತ್ತಿಯನ್ನು ಅವಲಂಬಿಸಲಿಲ್ಲ. ಇವನ ಫಿಲಸಾ ಫಿಕಲ್ ಇನ್ ಕ್ವೈರಿ ಇಂಟು ದಿ ಸಬ್ಲೈಮ್ ಅಂಡ್ ಬ್ಯೂಟಿಫುಲ್ (1756) ಎಂಬುದು ಇಂಗ್ಲೆಂಡಿನಲ್ಲಿ ಊರ್ಜಿತಗೊಂಡ ಸೌಂದರ್ಯ ಮೀಮಾಂಸಾ ಶಾಸ್ತ್ರಕ್ಕೆ ಬುನಾದಿ ಹಾಕಿದಂಥ ಪ್ರಮುಖ ಕೃತಿ. ಅಲ್ಲದೆ ಈತ 1759ರಲ್ಲಿ ಡಾಡ್ಯಾಲೆ ಎಂಬಾತ ಪ್ರಕಟಪಡಿಸತೊಡಗಿದ ಆ್ಯನ್ಯುಯಲ್ ರಿಜಿಸ್ಟರಿಗೆ ವಾರ್ಷಿಕ ಸಮೀಕ್ಷೆಯನ್ನು 1788ರ ವರೆಗೂ ಬರೆದ. ಹ್ಯಾಮಿಲ್‍ಟನ್ ಮತ್ತು ಮಾಕ್ರ್ವಿಸ್ ಆಫ್ ರಾಕಿಂಗ್ ಹ್ಯಾಮ್ ಇಬ್ಬರಿಗೂ ಆಪ್ತಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಅನೇಕಬಾರಿ ಅನೇಕ ಕಡೆಗಳಿಂದ ಪಾರ್ಲಿಮೆಂಟಿಗೆ ಚುನಾಯಿತನಾದ. ಈತ ಒಳ್ಳೆಯ ವಾಗ್ಮಿ. ಅಮೆರಿಕದ ವಸಾಹತುಗಳ ಬಗ್ಗೆ ಈತ ಮಾಡಿದ ಮೊದಲ ಭಾಷಣದಲ್ಲೆ ಅದರ ವೈಖರಿಯನ್ನು ಕಾಣಬಹುದು. ಅಚ್ಚಾದ ಈತನ ದಿ ಪ್ರೆಸೆಂಟ್ ಸ್ಟೇಟ್ ಆಫ್ ದಿ ನೇಷನ್ ಹಾಗೂ ತಾಟ್ಸ್ ಆನ್ ದಿ ಕಾಸ್ ಆಫ್ ದಿ ಪ್ರೆಸೆಂಟ್ ಡಿಸ್‍ಕಂಟೆಂಟ್ಸ್ ಎಂಬ ಭಾಷಣಗಳು ಗಂಭೀರವೂ ಉಜ್ಜ್ವಲವೂ ಆಗಿವೆ. ಈ ಹೊತ್ತಿಗೆ ಈತ ಡಾ. ಜಾನ್‍ಸನ್ನನ ನಿಕಟವರ್ತಿಗಳಲ್ಲೊಬ್ಬನಾದ.

	ಪಾರ್ಲಿಮೆಂಟಿನ ಸದಸ್ಯನಾಗಿ ಸರ್ಕಾರವನ್ನು ಟೀಕಿಸಿ ಈತ ಮಾಡಿದ ಆನ್ ಅಮೆರಿಕನ್ ಟ್ಯಾಕ್ಸೇಷನ್ ಹಾಗೂ ಆನ್ ಕನ್ಸಿಲಿಯೇಷನ್ ವಿತ್ ದಿ ಕಾಲೊನೀಸ್ ಎಂಬೆರಡು ಭಾಷಣಗಳು ತುಂಬ ಪ್ರಖ್ಯಾತವಾದುವು. ವಾರನ್ ಹೇಸ್ಟಿಂಗ್ಸ್‍ನ ಮೇಲೆ ಆಪಾದನೆ ಹೊರಿಸಿ ಅವನನ್ನು ವಿಚಾರಣೆಗೆ ಒಳಪಡಿಸಿದಾಗ ಈತ ಮಾಡಿದ ಇಂಗ್ಲಿಷ್ ಭಾಷಣ ಸಾಹಿತ್ಯದ ಪ್ರಕಾರದಲ್ಲೆ ಅತ್ಯಂತ ಗಮನಾರ್ಹವಾದುದಾಗಿದೆ.

	ಈತನ ರಿಫ್ಲೆಕ್ಷನ್ ಆನ್ಸ್ ದಿ ಫ್ರೆಂಚ್ ರೆವಲ್ಯೂಷನ್ ಎಂಬ ಪುಸ್ತಕ ಪ್ರಕಟವಾದ (1790) ಒಂದು ವರ್ಷದಲ್ಲೆ 11 ಮುದ್ರಣಗಳನ್ನು ಕಂಡಿತು. ಕ್ರಾಂತಿಯನ್ನು ಬೆಂಬಲಿಸುವ ಈತನ ವಾದ ಇಡೀ ಯೂರೋಪನ್ನೆ ತನ್ನತ್ತ ಸೆಳೆಯಿತು.

	ಬರ್ಕ್ ಈ ಐದು ಉತ್ತಮವೂ ನ್ಯಾಯವೂ ಗೌರವಾರ್ಹವೂ ಆದ ಗುರಿಗಳಿಗಾಗಿ ಶ್ರಮಿಸಿದ. 1. ಅರಸನ ಮತ್ತು ಅವನ ಸ್ನೇಹಿತರ ಹತೋಟಿಯಿಂದ ಕಾಮನ್ಸ್ ಸಭೆಯ ವಿಮೋಚನೆ. 2. ಅಮೆರಿಕದ ವಸಾಹತುಗಳ ವಿಮೋಚನೆ. 3. ಐರ್ಲೆಂಡಿನ ವಿಮೋಚನೆ. 4. ಭಾರತದಲ್ಲಿ ಈಸ್ಟ್ ಇಂಡಿಯ ಕಂಪನಿಯ ಸುಲಿಗೆ ಮನೋಭಾವಕ್ಕೆ ವಿರೋಧ. 5. ಫ್ರಾನ್ಸಿನ ಕ್ರಾಂತಿಯ ಪರವಾದ.

	ಬರ್ಕ್ ನಿಜವಾಗಿ ಎಷ್ಟು ಒಳ್ಳೆಯ ಗದ್ಯರಚಕನೊ ಅಷ್ಟು ಒಳ್ಳೆಯ ವಾಗ್ಮಿ ಅಲ್ಲ. ಮಾತಿನ ಪಟಾಕೋಪ, ಅಲಂಕಾರಿಕ ಭಾಷೆ, ಸಲ್ಲದ ಕೂಗಾಟ, ಮುಖ ಕೈ ಕಾಲುಗಳ ವಿಕಾರವಾದ ತಿರುಚು ಇವುಗಳಿಂದ ಸಭಿಕರು ಬೇಸರಗೊಳ್ಳುತ್ತಿದ್ದರು. ಆದರೆ ಬರೆವಣಿಗೆಯಲ್ಲಿ ನಾವು ಈತನ ಅದ್ವಿತೀಯವಾದ ಪಾಂಡಿತ್ಯ, ಪ್ರತಿಭೆ, ತರ್ಕ ಸುಲಭ ಸಂವಹನತೆ ಎಲ್ಲವನ್ನೂ ಕಾಣಬಹುದಾಗಿದೆ.

	ಗೋಲ್ಡ್‍ಸ್ಮಿತ್ ಹೇಳಿದ ಹಾಗೆ ಈತ ತನ್ನ ಭಾಷಣದ ವಿಷಯಕ್ಕೆ ಹಾವಿನ ಹಾಗೆ ಸುತ್ತು ಹಾಕಿಕೊಳ್ಳುತ್ತಿದ್ದ. ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯುತ್ತಮವೆನಿಸಿದ ಕಾವ್ಯನಾಟಕಗಳ ಮಟ್ಟಕ್ಕೆ ಬರುವ ಭಾಷಣಗಳೆಂದರೆ ಇವನದೇ ಎಂದು ವಿಮರ್ಶಕರ ಅಭಿಪ್ರಾಯ.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ